ಯಂಗ್‍ಹಸ್ಬೆಂಡ್
1863 - 1942. ಯೋಧ, ಶೋಧಕ, ಲೇಖಕ. ಭಾರತದಲ್ಲಿ ಜನನ. ಕ್ಲಿಪ್ಟನ್ ಸಾಂಡಸ್ರ್ಟ್‍ಗಳಲ್ಲಿ ಶಿಕ್ಷಣ ಪಡೆದು ಬ್ರಿಟಿಷ್ ಸೈನ್ಯ ಸೇರಿದ (1882). 1886ರಲ್ಲಿ ಮಧ್ಯ ಏಷ್ಯದಲ್ಲಿ ಕಾಶ್ಮೀರ ಮತ್ತು ಚೀನಗಳ ನಡುವೆ ಇರುವ ಮುಝುತಗ್ ಪರ್ವತಾವಳಿಯನ್ನು ದಾಟಿದ. 1890ರಲ್ಲಿ ಭಾರತದ ರಾಜಕಾರಣ ವಿಭಾಗಕ್ಕೆ ಈತನನ್ನು ವರ್ಗಮಾಡಿದರು. ಈತ ಟಿಬೆಟಿಗೆ ಹೋದ ಬ್ರಿಟಿಷ್ ನಿಯೋಗದ (1902) ಪ್ರಮುಖ ಸದಸ್ಯರಲ್ಲೊಬ್ಬ. ದಲಾಯಿ ಲಾಮಾನ ಮೇಲೆ ರಷ್ಯ ಬೀರುವ ಪ್ರಭಾವ ತಡೆಗಟ್ಟುವುದೇ ಈ ಸಮಿತಿಯ ಉದ್ದೇಶವಾಗಿತ್ತು. ಮುಂದೆ ಸಂಧಾನ ಫಲಿಸಿ ಟಿಬೆಟಿನೊಂದಿಗೆ ಒಪ್ಪಂದವಾಯಿತು (1904). ಅದೇ ವರ್ಷ ಈತನಿಗೆ ನೈಟ್‍ಹುಡ್ ದೊರೆಯಿತು. ಈತನ ಪ್ರಯತ್ನದಿಂದಲೇ ಟಿಬೆಟಿನ ರಾಜಧಾನಿ ಲಾಸ್ಹ ಭೌಗೋಳಿಕ ಸ್ಥಾನ ನಿರ್ಧರಿಸಲಾಯಿತು. ಅನಂತರ ಕಾಶ್ಮೀರದಲ್ಲಿ ರೆಸಿಡೆಂಟನಾಗಿಯೂ ಕೆಲಸ ಮಾಡಿದ (1906 - 09). ಈತ ಬರೆದ ಸೌತ್ ಆಫ್ರಿಕ ಟುಡೆ ಪುಸ್ತಕ 1898ರಲ್ಲಿ ಪ್ರಕಟವಾಯಿತು. ಟಿಬೆಟ್ ಮತ್ತು ಭಾರತ ಕುರಿತಂತೆ ಇನ್ ಇಂಡಿಯ ಅಂಡ್ ಟಿಬೆಟ್ ಎಂಬ ಪುಸ್ತಕ ಪ್ರಕಟಿಸಿದ (1910). ಇವುಗಳಲ್ಲಿ ಆ ದೇಶಗಳಲ್ಲಿನ ತನ್ನ ಅನುಭವಗಳನ್ನು ನಿರೂಪಿಸಿದ್ದಾನೆ.
(ಜಿ.ಎಸ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ